ಶಿವ ಪಾವರ್ತಿ ವಿಶ್ರಾಂತಿ ಪಡೆಯುವ ಸ್ಥಳ ಓಂಕಾರೇಶ್ವರ

ಪುರಾಣ ಕಥೆಗಳಲ್ಲಿ ಓಂಕಾರೇಶ್ವರ ಹಾಗೂ ಮಮಲೇಶ್ವರರ ಕುರಿತ ಉಲ್ಲೇಖವಿದೆ. ಇಲ್ಲಿ ಭಕ್ತರು ಮಂದಿರವನ್ನು ಪ್ರವೇಶಿಸುವ ಮುಂಚೆ ಎರಡು ಮಂಟಪಗಳನ್ನು ದಾಟಿ ಸಾಗಬೇಕಾಗುತ್ತದೆ. ಓಂಕಾರೇಶ್ವರ ಜ್ಯೋತಿರ್ಲಿಂಗವು ನೆಲದ ಮೇಲೆ ಸ್ಥಾಪಿತವಾಗದೇ ನೈಸರ್ಗಿಕವಾಗಿ ಎತ್ತರದ ಸ್ಥಳದಲ್ಲಿ ನಿರ್ಮಾಣಗೊಂಡಿರುವುದು ಅಚ್ಚರಿಯ ಸಂಗತಿ..
ಜ್ಯೋತಿರ್ಲಿಂಗ ಕ್ಷೇತ್ರದ ಸುತ್ತಲೂ ಸದಾ ಸ್ಫಟಿಕದಂತೆ ತಿಳಿಯಾದ, ಸಿಹಿಯಾದ ನರ್ಮದಾ ನೀರು ಹರಿಯುತ್ತಾ ಇರುತ್ತದೆ. ಈ ಜ್ಯೋತಿರ್ಲಿಂಗದ ವಿಶೇಷತೆಯೆಂದರೆ, ವಿಗ್ರಹವು ಗೋಪುರದ ಕೆಳಗಡೆ ಸ್ಥಾಪಿತವಾಗಿಲ್ಲ. ಮಂದಿರದ ಮೇಲ್ಬಾಗದಲ್ಲಿ ಅದನ್ನು ಶಿವನು ಸ್ಥಾಪಿಸಿದ ಎಂಬುದು ಇಲ್ಲಿನ ಜನರ ನಂಬಿಕೆ. ಮಾಳವಾ ಪ್ರದೇಶದ ಮಾಂಧಾತಾ ಪರ್ವತದ ಮೇಲೆ ವಿರಾಜಮಾನನಾಗಿದ್ದಾನೆ ಶ್ರೀ ಓಂಕಾರೇಶ್ವರ.
ಶಿವಪುರಾಣದಲ್ಲಿ ಓಂಕಾರೇಶ್ವರ ಹಾಗೂ ಮಮಲೇಶ್ವರರ ಕುರಿತು ಅನೇಕ ಕಥೆಗಳಲ್ಲಿವೆ. ಮಾಂಧತಾ ರಾಜ್ಯದ ಸೂರ್ಯ ವಂಶದ ಮಾಂಧಾತಾ ರಾಜ ಮನೆತನದವರಾದ ಆಂಬರೀಶ ಮತ್ತು ಮುಚುಕುಂದರು, ಘೋರ ತಪಸ್ಸನ್ನು ಮಾಡಿ ಶಿವನನ್ನು ಒಲಿಸಿಕೊಂಡ ಸ್ಥಳ ಇದು. ನಂತರ ತಮ್ಮ ಧಾರ್ಮಿಕ ಸೇವೆ ಮತ್ತು ತ್ಯಾಗಗಳಿಂದ ಕರ್ತವ್ಯ ನಿರ್ವಹಿಸಿದ ಹಿನ್ನೆಲೆಯಲ್ಲಿ ಈ ಪರ್ವತಕ್ಕೆ ಮಾಂಧಾತಾ ಎಂಬ ಹೆಸರು ಬಂತು ಎಂದು ಹೇಳಲಾಗುತ್ತಿದೆ.
ಶ್ರೀ ಓಂಕಾರೇಶ್ವರ ಜ್ಯೋತಿರ್ಲಿಂಗ ದೇವಾಲಯ ಮಾಂಧಾತ ಅಥವಾ ಶಿವಪುರಿ ಎಂದು ಕರೆಯಲ್ಪಡುವ ದ್ವೀಪದಲ್ಲಿದೆ. ಈ ದ್ವೀಪವು ಓಂಕಾರದ ರೂಪದಲ್ಲಿರುವುದರಿಂದ ಈ ಹೆಸರು ಬಂದಿದೆ. ನದಿಯ ಆಚೆ ದಡದಲ್ಲಿ ಮಮಲೇಶ್ವರ ಅಥವಾ ಅಮರೇಶ್ವರ ವೆಂಬ ಇನ್ನೊಂದು ಶಿವದೇವಾಲಯವಿದೆ ಅದನ್ನೂ ಜ್ಯೋತಿರ್ಲಿಂಗವೆಂದು ಹೇಳುತ್ತಾರೆ.

ಈ ಸ್ಥಳ ಸುಂದರ ಪ್ರಕೃತಿಯಲ್ಲಿ ನದಿಗಳ ಸಂಗಮದಲ್ಲಿದ್ದು ಮನೋಹರವಾಗಿದೆ. ನದಿಯ ಸಂಗಮದಲ್ಲಿ ಸ್ನಾನ ಮಾಡಿ ಅನೇಕ ಮೆಟ್ಟಲುಗಳನ್ನು ಏರಿ ದೇವಾಲಯಕ್ಕೆ ಹೋಗಬೇಕು. ದೇವಾಲಯ ಭವ್ಯವಾದ ಗೋಪುರ ಹೊಂದಿದೆ. ಗರ್ಭಗುಡಿ ಪ್ರವೇಶಿಸಿದರೆ ಪುಟ್ಟದಾದ ಶ್ರೀ ಓಂಕಾರೇಶ್ವರ ಜ್ಯೋತಿರ್ಲಿಂಗದ ದರ್ಶನವಾಗುತ್ತದೆ. ಗೋಲಾಕಾರದ ಸಣ್ಣಲಿಂಗ ನಿರಾಕಾರ ಈಶ್ವರನನ್ನೂ ಪ್ರಕೃತಿಯ ಮೂಲ ತತ್ವವನ್ನೂ ಪ್ರತಿನಿಧಿಸುತ್ತದೆ.
ಇಲ್ಲಿಯೂ ಭಕ್ತರು ಸ್ವತಃ ಅಭಿಶೇಕ ಮಾಡಿ ಪೂಜೆಮಾಡಿ ಸಂತೋಷ ಪಡಬಹುದು. ಮಂದಿರದ ಒಳಗಡೆ ಅನೇಕ ದೇವತೆಗಳ ಮೂರ್ತಿಗಳಿವೆ. ವಿಶೇಷವೆಂದರೆ ಇಲ್ಲಿ ಓಂಕಾರೇಶ್ವರನಿಗೆ ಬಿಲ್ವ ಪತ್ರದ ಜೊತೆ ತುಲಸೀಪತ್ರವನ್ನೂ ಅರ್ಪಿಸುತ್ತಾರೆ.
ಲಿಂಗದ ಹಿಂಭಾಗದಲ್ಲಿ ಪ್ರತ್ಯೇಕವಾಗಿ ಪಾರ್ವತಿಯ ಶ್ವೇತವರ್ಣದ ಮೂರ್ತಿ ಇದೆ. ರಾತ್ರಿ ಆದ ಮೇಲೆ ಪಾರ್ವತಿ ಪರಮೇಶ್ವರರಿಗಾಗಿ ಶಯನ ಸಿದ್ಧಪಡಿಸಿ, ಪಕ್ಕದಲ್ಲಿ ಪಗಡೆ ಮಣೆ ಇಟ್ಟಿರುತ್ತಾರೆ. ಪ್ರತಿ ರಾತ್ರಿ ಶಿವ ಪಾರ್ವತಿಯರು ಆಗಮಿಸಿ ವಿಶ್ರಾಂತಿ ಪಡೆದು ಪಗಡೆಯಾಡುತ್ತಾರೆ ಎಂದು ಭಕ್ತರ ನಂಬುಗೆ.
ಭಕ್ತರು ಇಲ್ಲಿ ಬಂದು ಮನೋನಿವೇದನೆ ಮಾಡಿಕೊಂಡರೆ ಅವರ ಎಲ್ಲಾ ಮನೋಕಾಮನೆಗಳು ಈಡೇರುತ್ತವೆ ಎಂದು ಹೇಳುತ್ತಾರೆ. ವಿಶೇಷವೆಂದರೆ ಇಲ್ಲಿ ದೇವರಿಗೆ ಅರ್ಪಿತವಾದ ನೈವೇದ್ಯವನ್ನು ಭಕ್ತರು ಸೇವಿಸುವ ಪದ್ಧತಿ ಇಲ್ಲ.
ಕಾರ್ತಿಕ ಪೂರ್ಣಿಮೆಯಂದು ಇಲ್ಲಿ ಜಾತ್ರೆ ನಡೆಯುತ್ತದೆ. ಪ್ರತಿ ಅಮಾವಾಸ್ಯೆ ಮತ್ತು ಏಕಾದಶಿ ಯಂದು ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುತ್ತಾರೆ.

ಈ ಸ್ಥಳದ ಬಗ್ಗೆ ಕೆಲ ವಿಶೇಷ ಕಥೆಗಳಿವೆ: ಸೂರ್ಯವಂಶದ ಚಕ್ರವರ್ತಿ ಮಾಂಧಾತನು ಇಲ್ಲಿ ತಪಸ್ಸು ಮಾಡಿದ್ದನೆಂದು ಸ್ಥಳ ಪರಾಣ ಹೇಳುತ್ತದೆ. ಒಮ್ಮೆ ನಾರದನು ವಿಂಧ್ಯ ಪರ್ವತಕ್ಕೆ ಬಂದು ಅದರ ಅಧಿಪತಿ ವಿಂಧ್ಯನ ಹತ್ತಿರ ಮೇರು ಪರ್ವತವು ನಿನಗಿಂತ ಎತ್ತರ ಇರುವುದರಿಂದ ಮೇರುವು ನಿನಗಿಂತ ಶ್ರೇಷ್ಠನೆನಿಸಿದ್ದಾನೆ ಎಂದನಂತೆ. ಅದಕ್ಕೆ ವಿಂಧ್ಯನು ಶಿವನನ್ನು ಕುರಿತು ತಪಸ್ಸು ಮಾಡಿದನು.
ಶಿವನು ತನ್ನ ಸ್ವರೂಪವನ್ನು ಎರಡುಭಾಗ ಮಾಡಿ ಒಂದು ಓಂಕಾರೇಶ್ವರ, ಇನ್ನೂಂದು ಪಾರ್ಥಿವ ರೂಪ ಅಮರೇಶ್ವರ ಎಂದು ವಿಭಾಗ ಮಾಡಿ ಪೂಜಿಸಲು ಹೇಳಿ ಅವನಿಗೆ ಬೇಕಾದ ವರ ಕೊಟ್ಟನು. ಆದರೆ ತನ್ನ ಭಕ್ತರಿಗೆ ತೊಂದರೆ ಕೊಡದಿರಲು ತಿಳಿಸಿದನು. ವಿಂದ್ಯನು ಇನ್ನೂ ಹೆಚ್ಚು ಎತ್ತರ ಬೆಳೆದು ಸೂರ್ಯ ಚಂದ್ರರ ಸಂಚಾರಕ್ಕೂ ತೊಂದರೆಯಾಯಿತು. ಆಗ ದೇವತೆಗಳೂ ಜನರೂ ಶಿವ ಭಕ್ತ ಮಹರ್ಷಿ ಅಗಸ್ತ್ಯರಿಗೆ ಸಹಾಯಮಾಡಲು ಕೋರಿದರು.
ಮಹರ್ಷಿ ಅಗಸ್ತ್ಯರು ವಿಂಧ್ಯ ಪರ್ವತಕ್ಕೆ, ದಕ್ಷಿಣಕ್ಕೆ ಹೋಗಲು ಬಂದರು. ಆಗ ವಿಂದ್ಯನು ಅವರಿಗೆ ಬಗ್ಗಿ ನಮಸ್ಕರಿಸಿ ತನ್ನನ್ನು ತುಳಿದು ದಾಟಿ ಹೋಗಲು ಹೇಳಿದನು. ಮಹರ್ಷಿ ಅಗಸ್ತ್ಯರು ಹಾಗೆಯೇ ಅವನನ್ನು ದಾಟಿ ತಾನು ಹಿಂತಿರುಗಿ ಬರುವವರೆಗೂ ಹೀಗೆಯೇ ಬಗ್ಗಿರಲು ಹೇಳಿ ದಕ್ಷಿಣ ಭಾರತಕ್ಕೆ ಹೋದರು. ಆದರೆ ಅವರು ಹಿಂತಿರುಗಿ ಉತ್ತರಕ್ಕೆ ಬರಲೇ ಇಲ್ಲ. ಹಾಗಾಗಿ ವಿಂಧ್ಯನು ಬೆಳೆಯುವುದನ್ನು ನಿಲ್ಲಿಸಿ ಬಗ್ಗಿದಂತೆಯೇ ಇದ್ದಾನೆ. ಶಿವನು ಕರುಣಿಸಿಕೊಟ್ಟ ಎರಡೂ ಲಿಂಗಗಳು ಇಲ್ಲಿಯೇ ಇದ್ದು ಪೂಜಿಸಲ್ಪಡುತ್ತಿವೆ.

ಈ ಸ್ಥಳದ ಬಗ್ಗೆ ಇರುವ ಮತ್ತೊಂದು ಕಥೆ ಎಂದರೆ, ದೇವದಾನವರಿಗೆ ಯುದ್ಧವಾದಾಗ ದೇವತೆಗಳು ದಾನವರಿಗೆ ಸೋತು ದಿಕ್ಕುಕಾಣದೆ ಶಿವನಿಗೆ ಮೊರೆ ಹೋದಾಗ ಶಿವನು ಓಂಕಾರೇಶ್ವರನಾಗಿ ಬಂದು ದಾನವರನ್ನು ಸೋಲಿಸಿ ಅಲ್ಲಿಯೆ ನೆಲೆಸಿದನೆಂದು ಪ್ರತೀತಿ ಇದೆ.
ಓಂಕಾರೇಶ್ವರನ ದೇವಾಲಯ ನೋಡಿದ ನಂತರ ಅಮಲೇಶ್ವರ ದೇವಾಲಯಯವನ್ನು ನೋಡಬೇಕು. ಅಲ್ಲದೆ ಇನ್ನೊಂದು ವಿಶೇಷವೆಂದರೆ ಇಲ್ಲಿ ನರ್ಮದಾನದಿಯ ಮಣ್ಣಿನಿಂದ ಸಣ್ಣ ಸಣ್ಣ ಲಿಂಗವನ್ನು ಮಾಡಿ ಪೂಜೆ ಮಾಡಿಸುತ್ತಾರೆ. ಹೀಗೆ ಸಣ್ಣ ಲಿಂಗವನ್ನು ಪೂಜೆ ಮಾಡಿದರೆ ಮಾತ್ರ ಓಂಕಾರೇಶ್ವರನ ದರ್ಶನದ ಪುಣ್ಯ ಲಭಿಸುವುದೆಂದು ಹೇಳುತ್ತಾರೆ.
ನಂತರ ಅನ್ನಪೂರ್ಣೇಶ್ವರೀ ದೇವಸ್ಥಾನ ನೋಡಲೇಬೇಕಾದ್ದು. ಇಲ್ಲಿ ಕಾಳೀ ಮತ್ತು ಸರಸ್ವತಿಯರೂ ಇದ್ದಾರೆ. ಕೊನೆಯಲ್ಲಿ ಋಣಮುಕ್ತೇಶ್ವರನ ದರ್ಶನ ಮಾಡಬೇಕು. ಇಲ್ಲಿ ದೇವರಿಗೆ ಕಡಲೆಬೇಳೆ ಅರ್ಪಿಸಿದರೆ ಎಲ್ಲಾ ಋಣಗಳಿಂದ ಮುಕ್ತಿ ದೊರೆಯುವುದೆಂದು ಹೇಳುವರು.
ಓಂಕಾರೇಶ್ವರನಿಗೆ ರಾತ್ರಿ ನಡೆಯುವ ದೀಪಾರತಿ ನಯನ ಮನೋಹರವಾಗಿರುತ್ತದೆ. ಎಲೆಗಳನ್ನು ಬಟ್ಟಲಿನಂತೆ ಮಡಚಿ, ಮದ್ಯದಲ್ಲಿ ಎಣ್ಣೆ ಬತ್ತಿ ಇಟ್ಟು ದೀಪ ಹಚ್ಚಿ ನದಿಯಲ್ಲಿ ತೇಲಿಬಿಡುತ್ತಾರೆ. ಸಾವಿರಾರು ಸಂಖ್ಯೆಯಲ್ಲಿ ನದಿಯಲ್ಲಿ ತೇಲುತ್ತಾ ಹೋಗುವ ದೀಪಗಳನ್ನು ನೋಡುವುದು ಒಂದು ಅವಿಸ್ಮರಣೀಯ ದೃಶ್ಯ.
ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ.. ಶೇರ್ ಮಾಡಿ.. ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮೂಲಕ ತಿಳಿಸಿ..
ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.. ನಮ್ಮನ್ನ ಫಾಲೋ ಮಾಡಿ..
► Subscribe to Planet Tv Kannada: https://www.youtube.com/Planet Tv Kannada
► Follow us on Facebook: https://www.facebook.com/Planettvkannada
► Follow us on Twitter:- https://twitter.com/Planettvkannada
► Follow us on Instagram:- https://www.instagram.com/planettvkannada
► Follow us on Pinterest: https://www.pinterest.com/Planettvkannada
► Follow us on Koo app:- https://www.kooapp.com/planettvkannada
► Follow us on share chat:- https://sharechat.com/planettvkannada
► Join us on Telegram:- https://t.me/planettvkannada
► Follow us on Tumblr:- https://www.tumblr.com/planet-tv-kannada
► Follow us on Reddit https://www.reddit.com/Planet-tv-kannada