ಇಲ್ಲಿನ ದೇವರಿಗೆ ಕಂತೆ ಕಂತೆ ಹಣ, ಚಿನ್ನದ ಹರಕೆ ಬೇಕಿಲ್ಲ..! ಭಕ್ತಿಯಿಂದ ಮಣ್ಣಿನ ಹರಕೆ ನೀಡಿದರೆ ಸಾಕು..!
source and pic credit: Temple of secrets
ಮಣ್ಣಲ್ಲೇ ಹೊನ್ನು ಬೆಳೆಯೋರು ಕನ್ನಡಿಗರು.. ಮಣ್ಣಲ್ಲೇ ಭಗವಂತನ ಕಾಣೋರು ತುಳು ನಾಡಿನ ಜನರು.. ಮಣ್ಣನ್ನೇ ದೇವರಿಗೆ ಹರಕೆನೀಡ್ತಾರೆ. ಈ ರೀತಿಯ ಹರಕೆಯಿಂದ ಬೇಡಿಕೆ ಈಡೇರುತ್ತೆ ಅನ್ನೋದು ಅವರ ನಂಬಿಕೆ..ಕಾನನದ ನಡುವಲ್ಲೊಂದು ಕಾರಣಿಕದ ದೇವಾಲಯ . ಕರಾವಳಿಯಲ್ಲೊಂದಿದೆ ಅಂಗರೂಪದ ಶಿವಾಲಯ.. ಕೊಟ್ರೆ ಸಾಕು ಮಣ್ಣಿನ ಆಕಾರ..ಇಷ್ಟಾರ್ಥ ಸಿದ್ಧಿಗೆ ಮಣ್ಣೇ ಪರಿಹಾರ..
ಪರಶುರಾಮ ಸೃಷ್ಟಿ ತುಳುನಾಡು ಅನೇಕ ದೇವಾಲಯಗಳ ಬೀಡು. ಗತಕಾಲದಿಂದಲೂ ಗಮನ ಸೆಳೆಯುವ ದೇವಾಲಯ, ಇಂದಿಗೂ ತನ್ನ ಪಾವಿತ್ರತೆಯನ್ನು ಉಳಿಸಿಕೊಂಡೇ ಬಂದಿದೆ. ಅದರದ್ದೇ ಆದ ಪಾವಿತ್ರತೆಯಿಂದ ಪ್ರಪಂಚಕ್ಕೆ ಪರಿಚಯವಾಗಿದೆ. ಅದೇ ಸಾಲಿಗೆ ಸೇರುತ್ತೆ ಈ ಸುರ್ಯ ಎಂಬ ಹಳ್ಳಿಯ ಸದಾಶಿವ ರುದ್ರ ದೇವಾಲಯ.
source and pic credit: temple of-secrets.blogspot.com
ಸದಾಶಿವನಿಗೆ ಮಣ್ಣಿನ ಹರಕೆಯೇ ಪ್ರಿಯ
ಭಾರತೀಯ ಸಂಸ್ಕೃತಿಯೇ ವಿಶಿಷ್ಟ. ಇತಿಹಾಸದ ಪುಟ ಒಮ್ಮೆ ತಿರುವಿದ್ರೆ ಸಾಕು ಪ್ರಕೃತಿ ಪೂಜೆಯ ಇಂಚಿಂಚೂ ಮಾಹಿತಿ ಸಿಗುತ್ತೆ. ಅದ್ರಲ್ಲೂ ತುಳುನಾಡಿನ ಜನರು ಪರಿಸರದ ಆರಾಧಕರು. ವಾತಾವರಣವನ್ನೇ ದೇವರ ಗುಡಿಯಾಗಿಸಿ ಪ್ರಾರ್ಥಿಸ್ತಾರೆ. ಹಸಿರ ಹೊದಿಕೆಯಲ್ಲಿ ಏನಿರುತ್ತೋ ಅದನ್ನೇ ಹರಕೆಯಾಗಿ ಸಲ್ಲಿಸಿ ಕೃತಾರ್ಥರಾಗ್ತಾರೆ. ಪ್ರತಿಯೊಂದು ದೇವಾಲಯದಲ್ಲಿ ಒಂದೊಂದು ವಿಶೇಷವಿರುತ್ತದೆ. ಭಕ್ತರು ಹರಕೆ ಹೊತ್ತರೆ ಅದು ಈಡೇರಿದ ನಂತರ ಬೇರೆ ಬೇರೆ ರೀತಿಯಲ್ಲಿ ಹರಕೆ ಸಲ್ಲಿಸುತ್ತಾರೆ. ಕೆಲವು ದೇವಾಲಯದಲ್ಲಿ ಪಟ್ಟೆ ಸೀರೆ ನೀಡುವ ಆಚರಣೆ ಇದ್ದರೆ ಇನ್ನೂ ಹಲವು ದೇವಾಲಯದಲ್ಲಿ ಬೆಲೆಬಾಳುವ ವಸ್ತುಗಳು, ಗಂಟೆ ಹೀಗೆ ಇನ್ನಿತರ ವಸ್ತುಗಳನ್ನು ಸಮರ್ಪಿಸುತ್ತಾರೆ. ಹಾಗೆ ಸಲ್ಲಿಸಿದರೆ ಮಾತ್ರ ಅವರ ಹರಕೆ ಈಡೇರುತ್ತದೆ,ಅನ್ನೋದು ನಂಬಿಕೆ. ದಕ್ಷಿಣ ಕನ್ನಡ ಜಿಲ್ಲೆಯ ಕಾನನದ ನಡುವಲ್ಲಿ ಪ್ರಕೃತಿ ಆರಾಧಕನ ದೇವಾಲಯವೊಂದಿದೆ.ಅಲ್ಲಿ ಸದಾಶಿವ ನೆಲೆನಿಂತು ಭಕ್ತರಿಂದ ಮಣ್ಣಿನ ಹರಕೆಯನ್ನೇ ಸ್ವೀಕರಿಸುತ್ತಾನೆ.
source and pic credit: mangalore heritage
ಹೌದು ಇಲ್ಲಿನ ದೇವರಿಗೆ ವಜ್ರ ವೈಢೂರ್ಯದ ಅಗತ್ಯವಿಲ್ಲ. ಕಂತೆಗಟ್ಟಲೆ ಹಣ ತಂದು ಸುರಿಯಬೇಕಾಗಿಲ್ಲ.ಇಲ್ಲಿ ಏನಿದ್ರೂ ಮಣ್ಣಿನ ಹರಕೆಯೇ ಸದಾಶಿವನಿಗೆ ಅಚ್ಚುಮೆಚ್ಚು. ನಮ್ಮ ಇಷ್ಟಾರ್ಥ ನೆರವೇರಬೇಕಂದ್ರೆ ಪರಿಸರ ಸ್ನೇಹಿ ಮಣ್ಣಿನ ಮೂರ್ತಿ ನೀಡಿದ್ರೆ ಸಾಕು, ಅಂದುಕೊಂಡಿದ್ದು ಆಗೇ ಬಿಡುತ್ತೆ. ದಕ್ಷಿಣ ಕನ್ನಡದತ್ತ ಹೆಜ್ಜೆ ಹಾಕಿದ್ರೆ ನಮ್ಮನ್ನು ಮೊದಲು ಸ್ವಾಗತಿಸೋದೆ ಪಶ್ಚಿಮಘಟ್ಟಗಳು, ಅದೇ ಸಾಲಿನ ಬೆಳ್ತಂಗಡಿ ತಾಲೂಕಿನ ಸುರ್ಯ ಎಂಬ ಗ್ರಾಮದಲ್ಲಿದೆ. ಸುರ್ಯ ಸದಾಶಿವರುದ್ರ ದೇವಸ್ಥಾನ.ಇದು ಇಂದಿಗೂ ಮಣ್ಣಿನ ಹರಕೆಯ ದೇವಸ್ಥಾನ ಎಂದೇ ಪ್ರಸಿದ್ಧಿ.
ಪ್ರತಿಯೊಬ್ಬರಿಗೂ ತಮ್ಮದೇ ಆದ ಸಮಸ್ಯೆ ಇದ್ದೇ ಇರುತ್ತೆ. ಕೆಲವರು ಸಮಸ್ಯೆಯ ಜೊತೆಗೆ ಬದುಕುತ್ತಿರುತ್ತಾರೆ. ಇನ್ನೂ ಕೆಲವರು ಸಮಸ್ಯೆಗೆ ಪರಿಹಾರ ಹುಡುಕಿಕೊಂಡೇ ಕಾಲ ಕಳೆಯುತ್ತಾರೆ. ಮತ್ತೂ ಹಲವರಿಗೆ ಅಭಿಲಾಷೆಗಳೇ ಜೀವನವಾಗಿರುತ್ತೆ. ಹೇಗಾದ್ರೂ ತಮ್ಮ ಕನಸು ನನಸಾಗ್ಲಿ ಅನ್ನೋ ತವಕದಲ್ಲಿರುತ್ತಾರೆ. ಅಂತವರೆಲ್ಲರೂ ಈ ದೇವಳಕ್ಕೆ ಭೇಟಿ ನೀಡಲೇ ಬೇಕು. ಯಾಕಂದ್ರೆ ಅಗ್ಗದ ಹರಕೆಗೆ ಈಡೇರುತ್ತೆ ನಿಮ್ಮ ಕೋರಿಕೆ.
ಇಲ್ಲಿನ ಹರಕೆ ರೂಪವೇ ವಿಶೇಷ. ನಿಮ್ಮ ಸಂಕಲ್ಪದ ಪ್ರತಿರೂಪವನ್ನು ಮಣ್ಣಿನ ಬೊಂಬೆಯ ರೂಪದಲ್ಲಿ ನೀಡಿದ್ರೆ ಸಾಕು ನಿಮ್ಮ ಇಷ್ಟಾರ್ಥ ಸಿದ್ದಿಯಾಗತ್ತೆ. ಹೌದು ತಮ್ಮ ಇಷ್ಟಾರ್ಥ ಪ್ರಾಪ್ತಿಗಾಗಿ, ಸಂಕಷ್ಟ ನಿವಾರಣೆಗಾಗಿ ದೇವರಲ್ಲಿ ಭಕ್ತಿಯಿಂದ ಪ್ರಾರ್ಥನೆ ಮಾಡಿಕೊಂಡು ತಮ್ಮ ಸಂಕಲ್ಪ ಸಿದ್ಧಿಯಾದ ನಂತರ, ತಾವು ಪ್ರಾರ್ಥಿಸಿದ ರೀತಿಯ ಮಣ್ಣಿನ ಗೊಂಬೆಗಳನ್ನು ಹರಕೆಯ ರೂಪದಲ್ಲಿ ಶ್ರೀ ಸದಾಶಿವರುದ್ರ ದೇವರಿಗೆ ಅರ್ಪಿಸುವುದು ಸುರ್ಯ ಕ್ಷೇತ್ರದ ವಿಶಿಷ್ಟ ಸಂಪ್ರದಾಯವೂ ಆಗಿದೆ.
source and pic credit: epuja.co.in
ಸದಾಶಿವರುದ್ರ ಕ್ಷೇತ್ರ, ಗತಕಾಲದ ಕೊಡುಗೆ
ದಕ್ಷಿಣ ಕನ್ನಡದ ದೇವಾಲಯ ಎಂದಾಕ್ಷಣ ನೆನಪಿಗೆ ಬರೋದೇ ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ , ಈ ಬೃಹತ್ ಕ್ಷೇತ್ರಗಳಿಗೆ ಹೋಗೋ ದಾರಿಯಲ್ಲಿರೋದೆ ಸುರ್ಯ ಸದಾಶಿವ ದೇವಾಲಯ, ಹೌದು , ಧರ್ಮಸ್ಥಳಕ್ಕೆ ಹೋಗುವ ದಾರಿಯಾಗಿ ಬೆಳ್ತಂಗಡಿಯ ಬಳಿ ನಡ ಎನ್ನುವ ಗ್ರಾಮಕ್ಕೆ ಹೋದರೆ ಅಲ್ಲಿ ಗೋಚರವಾಗುವುದೇ ಸುರ್ಯ ಸದಾಶಿವ ದೇವಾಲಯ.ಧರ್ಮಸ್ಥಳ ಸಮೀಪದ ಉಜಿರೆಯಿಂದ ಇಲ್ಲಿಗೆ ಕೇವಲ ನಾಲ್ಕು ಕಿಲೋಮೀಟರ್ ಗಳ ಹಾದಿ. ಧರ್ಮಸ್ಥಳದಿಂದ ಸುಮಾರು ಹದಿಮೂರು ಕಿಲೋಮೀಟರ್ ಗಳಿವೆ. ಹಸಿರು ಕಾನನದ ಮಧ್ಯೆ ಅದ್ಭುತವಾಗಿ ಗೋಚರಿಸೋ ದೇವಳ ಐತಿಹ್ಯದ ಕೊಡುಗೆ.
ಮಹರ್ಷಿಗಳ ತಪಸ್ವೀ ಭೂಮಿ
ಮಣ್ಣು ಮತ್ತು ಮಹಾದೇವನ ನಿರಂತರ ಸಂಬಂಧವನ್ನು ಸಾಂಕೇತಿಕವಾಗಿ ಸಾರುವ ದೇವಸ್ಥಾನದ ಐತಿಹ್ಯವೇ ಅದ್ಭುತ.. ಹಿಂದೆ ಇದೊಂದು ಮಹರ್ಷಿಗಳ ತಪೆಸ್ವೀ ಭೂಮಿಯಾಗಿತ್ತು. ಜಪತಪಗಳಿಂದ ದೇವರೊಲಿದ ಪುಣ್ಯತಾಣವಾಗಿತ್ತು. ಹಿಂದೆ ಭೃಗು ಮಹರ್ಷಿಗಳ ಶಿಷ್ಯರೊಬ್ಬರು ಕೈಲಾಸಾಧಿಪತಿಗಳನ್ನು ಒಲಿಸುವ ಉದ್ದೇಶದಿಂದ ಇಲ್ಲಿ ತಪಸ್ಸು ಮಾಡುತ್ತಿದ್ದರಂತೆ. ಅವರ ತಪಸ್ಸಿಗೆ ಒಲಿದ ಶಿವ -ಪಾರ್ವತಿಯರು ಪ್ರತ್ಯಕ್ಷರಾದರಂತೆ. ಭಕ್ತನ ಕೋರಿಕೆಯನ್ನು ಈಡೇರಿಸುವಂತೆ ಮಾತುಕೊಟ್ಟನಂತೆ ಮಹೇಶ್ವರ. ಆ ಋಷಿಯು ಕೈಲಾಸಾದಿಪತಿಯರನ್ನು ಧರೆಯಲ್ಲಿಯೇ ನೆಲೆಯೂರುವಂತೆ ಹೇಳಿದರಂತೆ, ಕೋರಿಕೆಯಂತೆ ಇಲ್ಲೇ ಲಿಂಗ ರೂಪದಲ್ಲಿ ನೆಲೆಯಾದರಂತೆ ಶಿವ ಪಾರ್ವತಿಯರು. ಇದರ ಕುರುಹುಗಳು ಈಗಲೂ ಇಲ್ಲಿದೆ. ಎರಡು ಲಿಂಗರೂಪದ ಕಲ್ಲುಗಳಿವೆ. ಜೊತೆಗೆ ಶಿಲಾಪಾದವನ್ನೂ ಇಲ್ಲಿ ಕಾಣಬಹುದು.
source and pic credit: rvatemples
ಈ ದೇವಾಲಯದ ಹಿಂದೆ ಒಂದು ಹೆಣ್ಣಿನ ಪಾತ್ರವೂ ಇದೆ..!
ಈ ಕ್ಷೇತ್ರಕ್ಕೆ ಸುರ್ಯ ಎಂಬ ಹೆಸರು ಬರಲು ಕಾರಣವಾದ ದಂತಕಥೆಯೂ ಒಂದಿದೆ. ಅನೇಕ ವರುಷಗಳ ನಂತರ ಇಲ್ಲಿಗೆ ಕಾಡಿನಿಂದ ಸೊಪ್ಪು ಕೀಳಲು ಹೆಂಗಸೊಬ್ಬಳು ಬಂದಳಂತೆ. ಸೊಪ್ಪು ಕಡಿಯುತ್ತಾ ಅವಳ ಕತ್ತಿ ಒಂದು ಕಲ್ಲಿಗೆ ತಾಗಿ ರಕ್ತ ಚಿಮ್ಮಿತ್ತಂತೆ. ಗಾಬರಿಗೊಂಡ ಆಕೆ ತಮ್ಮ ಮಗನನ್ನು ಸುರಿಯ ಎಂದು ಕೂಗಿದಳಂತೆ. ನಿರಂತರ ಆ ಊರು ಸುರಿಯಾ ಎಂಬುದಾಗಿ ನಾಮಾಂಕಿತವಾಯಿತಂತೆ. ಆ ಲಿಂಗರೂಪಿ ಶಿಲೆಗೆ ದೇವಾಲಯ ನಿರ್ಮಿಸಿ ಪೂಜಿಸಲಾಯಿತು ಎಂಬ ಪ್ರತೀತಿ ಇದೆ. ಇನ್ನೊಂದೆಡೆ ರಾಜ ಮನೆತನದ ಧಾರಾಳ ಕೊಡುಗೆಯೂ ಈ ಈ ದೇವಾಲಯಕ್ಕೆ ಇದೆ. ಬಂಗರಸರು ಈ ದೇವಾಲಯಕ್ಕಾಗಿ ಶ್ರಮಿಸಿದವರು. ಚಿಕ್ಕದಾಗಿದ್ದ ಈ ಸದಾಶಿವನ ಗುಡಿಯನ್ನು ಸುಮಾರು ಹದಿಮೂರನೆಯ ಶತಮಾನದಲ್ಲಿ ಬಂಗ ಅರಸರು ಮರು ನಿರ್ಮಾಣ ಮಾಡಿದರು ಎಂಬುದು ಐತಿಹ್ಯದ ಮೆಲುಕು.
ಶಿವನಿಗಿಲ್ಲಿ ಮಣ್ಣಿನ ಗೊಂಬೆಗಳೇ ಹೊನ್ನು
source and pic credit: temple of-secrets.blogspot.com
ಇಲ್ಲೊಂದು ಸತ್ಯಕ್ಕೆ ನಿಲುಕದ ಭಕ್ತಿ ಭಾವದ ಕಥೆಯೊಂದಿದೆ. ಹಿಂದೆ ಲಿಂಗ ಪೂಜೆ ಮಾಡುವಂತಹ ಸಮಯದಲ್ಲಿ ಶಿವ ಪ್ರಿಯ ಬಿಲ್ವಪತ್ರೆ ದೊರೆಯದ ಸಂದರ್ಭ ಮರುಕದಿಂದ ಪೂಜಾರಿ ಮಣ್ಣನ್ನೇ ಶಿವಲಿಂಗಕ್ಕೆ ಮೆತ್ತಿದರಂತೆ. ಮರುದಿನ ಬೆಳಗ್ಗೆ ನೋಡಿದ್ರೆ ಅದು ಬಿಲ್ವಪತ್ರೆಯಾಗಿ ಬದಲಾಯಿತಂತೆ. ಅಂದಿನಿಂದ ದೇವಾಲಯಕ್ಕೆ ಮಣ್ಣಿನ ಪ್ರತಿರೂಪವೇ ಹರಕೆಯಾಗಿ ರೂಢಿಯಾಯಿತಂತೆ. ಇನ್ನು ಶಿವಲಿಂಗ ಇರೋ ಜಾಗದಲ್ಲಿ ಭಕ್ತರು ದೇವಸ್ಥಾನಕ್ಕೆ ಸಲ್ಲಿಸಿದಂತಹ ಮಣ್ಣಿನ ಹರಕೆಗಳನ್ನು ಇಡುತ್ತಿದ್ದಾರೆ. ಇಂದಿಗೂ ಇಲ್ಲಿನ ಲಿಂಗರೂಪಿ ಶಿಲೆಗಳಿಗೆ ನಿತ್ಯ ಪೂಜೆಯನ್ನು ಸಲ್ಲಿಸಲಾಗುತ್ತಿದೆ. ದೇವಸ್ಥಾನದಿಂದ ಉತ್ತರಕ್ಕೆ ಸುಮಾರು 100 ಮೀ. ದೂರದಲ್ಲಿ ಒಂದು ಹರಕೆ ಬನವಿದೆ.
ಭಕ್ತರಿಂದ ಸಮರ್ಪಿತವಾದಂತಹ ಹರಕೆ ಗೊಂಬೆಗಳನ್ನು ಇಲ್ಲಿಯೇ ಇಡಲಾಗುತ್ತಿರುವುದರಿಂದ ಈ ಸ್ಥಳ ಹರಕೆ ಬನ ಎನ್ನುವ ಹೆಸರಿನಲ್ಲಿ ಪ್ರಸಿದ್ಧವಾಗಿದೆ. ಅರ್ಚಕರು ಹರಕೆಯ ಗೊಂಬೆಗಳನ್ನು ಆ ಬನದಲ್ಲಿ ಇಡುತ್ತಾರೆ. ಭಕ್ತರು ಗೊಂಬೆಗಳ ಜೊತೆ ಅಕ್ಕಿಯನ್ನೂ ನೀಡುತ್ತಾರೆ, ಅರ್ಪಿಸಿದ ಗೊಂಬೆಗಳನ್ನು, ಅಕ್ಕಿಯನ್ನು ಮಧ್ಯಾಹ್ನದ ಪೂಜೆಗೂ ಮೊದಲು ಸಲ್ಲಿಸಬೇಕು . ಅದನ್ನು ಹರಕೆ ಬನಕ್ಕೆ ತೆಗೆದುಕೊಂಡು ಹೋಗಿ ಅರ್ಚಕರು ಗೊಂಬೆಗಳನ್ನು ಜೋಡಿಸುತ್ತಾರೆ. ಇಲ್ಲಿನ ದೇವರಿಗೆ ಮಣ್ಣಿನ ಗೊಂಬೆಗಳನ್ನು ಹರಕೆಯಾಗಿ ನೀಡುತ್ತಾರೆ. ಭಕ್ತರು ಏನಾದರೂ ಬೇಡಿಕೆಯನ್ನು ದೇವರ ಮುಂದಿಟ್ಟು ಅದು ಈಡೇರಿದಲ್ಲಿ ಮಣ್ಣಿನಗೊಂಬೆಗಳನ್ನ ಹರಕೆಯಾಗಿನೀಡುತ್ತಾರೆ.
source and pic credit: temple of-secrets.blogspot.com
ಇನ್ನು ಈ ಗೊಂಬೆಗಳನ್ನು ಆವೆ ಮಣ್ಣಿನಲ್ಲಿ ಮಾಡಲಾಗುತ್ತದೆ. ಕರ್ನಾಟಕದ ದೂರದ ಊರುಗಳಿಂದ ಬರುವ ಭಕ್ತರಿಗೆ ಸಹಾಯವಾಗುವಂತೆ ಮಣ್ಣಿನ ಗೊಂಬೆಗಳನ್ನು ಕುಂಬಾರರಿಂದ ಮಾಡಿಸಿ ದೇವಸ್ಥಾನದ ಆವರಣದಲ್ಲೇ ಲಭ್ಯವಿರುವಂತೆ ಮಾಡಲಾಗಿರುವುದು. ಭಕ್ತರಿಗೆ ಅನುಕೂಲಕರ ಸಂಗತಿ. 50 ರೂ.ಯಿಂದ 200 ರೂಪಾಯಿ ವರೆಗೆ ಮಣ್ಣಿನ ಗೊಂಬೆಗಳನ್ನು ಇಲ್ಲಿ ಕಾಣಬಹುದು.
ಇಲ್ಲಿ ಇಷ್ಟಾರ್ಥ ಸಿದ್ಧಿ ಮಾತ್ರವಲ್ಲ ರೋಗ ನಿವಾರಣೆಗೂ ಔಷಧಿಯಿದೆ ಎಂಬುದಕ್ಕೂ ಸಾಕ್ಷ್ಯಗಳಿವೆ. ತುಸು ದೂರದ ಜಾಗದಲ್ಲಿರುವ ಜನ ಗಂಭೀರ ಕಾಯಿಲೆಗಳಿಗೆ ,ಇಲ್ಲಿ ಮಣ್ಣಿನ ಮೂರ್ತಿಯ ಹರಕೆ ಹೊತ್ತರೆ ಮನುಷ್ಯರ ಮಾತ್ರವಲ್ಲ ಪ್ರಾಣಿಗಳ ರೋಗವೂ ವಾಸಿಯಾಗತ್ತೆ ಅನ್ನೋ ನಂಬಿಕೆಯಿಂದಲೂ ಹರಕೆ ಕಟ್ಟುತ್ತಾರೆ. ಸ್ಥಳೀಯರು ತಮ್ಮ ಕೋಳಿಗೆ ಬಂದ ರೋಗ ಗುಣವಾಗುವುದಕ್ಕೆ ಕೂಡಾ ಹರಕೆ ಕಟ್ಟಿದ್ದುಂಟು. ಇನ್ನು ಬೀಡಿ ಕಟ್ಟುವ ಕೆಲಸ ಮಾಡುವವರು ಅಲ್ಲೇನೋ ಸಮಸ್ಯೆ ಬಂದದ್ದಕ್ಕೆ ಹರಕೆ ಕಟ್ಟುತ್ತಾರೆ. ಇವೆಲ್ಲದಕ್ಕೂ ಜೀವಂತ ನಿದರ್ಶನ ಅಂದ್ರೆ ಕೋಳಿಯ ಮಣ್ಣಿನ ಮೂರ್ತಿಗಳು.
ಇನ್ನು, ಈ ದೇವಾಲಯ ವಿದ್ಯಾರ್ಥಿಗಳಿಗೂ ಅಚ್ಚುಮೆಚ್ಚು. ಪರೀಕ್ಷಾ ಸಂದರ್ಭದಲ್ಲಿ ವಿದ್ಯಾರ್ಥಿಗಳ ದಂಡೇ ಹರಿದು ಬರುತ್ತೆ. ಪುಸ್ತಕ ಪೆನ್ನುಗಳ ಮಣ್ಣಿನ ಪ್ರತಿರೂಪಗಳೇ ಇದಕ್ಕೆ ಸಾಕ್ಷಿ. ಹಾಗೆಯೇ, ಈ ದೇವಾಲಯದಲ್ಲಿ ಹೃದಯ, ಮೂತ್ರಪಿಂಡದಿಂದ ಹಿಡಿದು ಮೊಬೈಲ್, ಕಂಪ್ಯೂಟರ್, ಮನೆಯಂಥಾ ಮಣ್ಣಿನ ಗೊಂಬೆಗಳಿರುವುದು ಕಾಣುತ್ತವೆ. ಲಕ್ಷಾಂತರ ಸಂಖ್ಯೆಯಲ್ಲಿರುವ ಈ ಬೊಂಬೆಗಳು ಮನುಷ್ಯನ ಸಂಕಟಕ್ಕೆ ಮತ್ತು ಅದು ಪರಿಹಾರಗೊಂಡದ್ದಕ್ಕೆ ಸಾಕ್ಷಿಯಂತಿದೆ.
source and pic credit: google.com
ಈ ದೇವಾಲಯಕ್ಕೆ ಧರ್ಮಸ್ಥಳದಿಂದ ಹದಿಮೂರು ಕಿಮೀಗಳ ಉಜಿರೆ ಹಾದಿಯಾಗಿಯೂ ಹೋಗಬಹುದು. ಅಥವಾ ಬೆಳ್ತಂಗಡಿಯಿಂದ ಕಿಲ್ಲೂರು ರೋಡ್ ಆಗಿ ಆ ಮೂಲಕವೂ ಹೋಗಬಹುದು.ಇಲ್ಲಿಗೆ ಬರೋ ಭಕ್ತರು ಒಂದೊಂದು ಕಥೆಯನ್ನು ಹೊತ್ತು ಈ ಕ್ಷೇತ್ರಕ್ಕೆ ಬರುತ್ತಾರೆ. ತಮ್ಮ ಪ್ರಾರ್ಥನೆಯನ್ನು ಮನ್ನಿಸಿದ ಬಳಿಕವೇ ಹರಕೆಯನ್ನು ತೀರಿಸಲು ಇಲ್ಲಿಗೆ ಭಕ್ತರು ಆಗಮಿಸುತ್ತಾರೆ. ಮದುವೆಯಾಗಿ ಮಕ್ಕಳಾಗದೇ ಇದ್ದ ಸಮಯದಲ್ಲಿ ಇಲ್ಲಿ ಬಂದು ಹರಕೆ ನೀಡುತ್ತೇವೆಂದು ಪ್ರಾರ್ಥಿಸಿದವರಿಗೆ ಇಲ್ಲಿ ಮಕ್ಕಳಾಗಿದೆ. ಹುಟ್ಟಿದಂದಿನಿಂದ ಮಾತನಾಡದೇ ಇದ್ದ ಪುಟ್ಟ ಬಾಲಕಿಯು ಮಾತನಾಡಬೇಕೆಂದು ಹರಕೆ ಸಲ್ಲಿಸಿದ ತಾಯಿಯೊಬ್ಬಳ ಪ್ರಾರ್ಥನೆಯೂ ಫಲಿಸಿದ್ದು, ದೇವರಿಗೆ ಮಣ್ಣಿನ ನಾಲಗೆಯ ಪ್ರತಿರೂಪವನ್ನು ಅರ್ಪಿಸುವ ಮೂಲಕ ತನ್ನ ಹರಕೆಯನ್ನು ಸಲ್ಲಿಸಿದ್ದಾರೆ.
ಮಕ್ಕಳಾಗಬೇಕೆಂದು ಮನೆಯಲ್ಲಿ ಸಂಕಲ್ಪ ಮಾಡಿ ದೇವರಿಗೆ ಅಕ್ಕಿನಾಣ್ಯ ಕಟ್ಟಿಟ್ಟರೆ, ಹರಸಿಕೊಂಡದ್ದು ಈಡೇರಿದ ಬಳಿಕ ಈ ದೇವಾಲಯಕ್ಕೆ ಭೇಟಿ ನೀಡಬಹುದು. ಆವೆಮಣ್ಣಿನ ಈ ಬೊಂಬೆಗಳನ್ನು ನೀವೇ ತಯಾರಿಸಬಹುದು. ಆದರೆ ಅದರಲ್ಲಿ ಬಿರುಕು ಇರಬಾರದು. ಈ ಸ್ಥಳದಲ್ಲೂ ನಾನಾ ನಮೂನೆಯ ಮಣ್ಣಿನ ಬೊಂಬೆಗಳು ಸಿಗುತ್ತವೆ. ಯಾವುದೋ ಲೋಪವಿಲ್ಲದ ಬೊಂಬೆಯನ್ನು ಖರೀದಿಸಿ ಅಕ್ಕಿ, ತೆಂಗಿನಕಾಯಿ ಜೊತೆಗೆ ಈ ಮಣ್ಣಿನ ಬೊಂಬೆಯನ್ನು ಹರಿವಾಣದಲ್ಲಿಟ್ಟು ಹರಕೆ ಸಮರ್ಪಿಸಬಹುದು.
from ಸುದ್ದಿ - Planet Tv https://ift.tt/3vI5fs1
May 28, 2021 at 04:22PM