ಭಾರತದಲ್ಲಿರುವ 1000 ವರ್ಷಗಳಿಗೂ ಹಿಂದಿನ ಪುರಾತನ ದೇವಾಲಯಗಳಿವು
Image Credits : Tour My india
ವಿಶ್ವದಲ್ಲೇ ಶ್ರೀಮಂತ ಪರಂಪರೆಗೆ ಅತ್ಯಂತ ಹೆಸರುವಾಸಿಯಾದ ದೇಶವೆಂದರೆ ಅದು ಭಾರತ. ಇಲ್ಲಿ ದೇಶದ ಮೂಲೆ ಮೂಲೆಗಳಲ್ಲೂ ದೇವಾಲಯಗಳು ಕಾಣಸಿಗುತ್ತವೆ. ಶತಮಾನಗಳಷ್ಟು ಹಳೆಯದಾದ ಪುರಾತನ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಅದೆಷ್ಟೋ ದೇವಾಲಯಗಳು ಇಲ್ಲಿವೆ. ರಾಜರ ಕಾಲದ ಅದೆಷ್ಟೋ ದೇಗುಲಗಳು ತಮ್ಮ ವಿಶಿಷ್ಟ ವಾಸ್ತುಶಿಲ್ಪ, ಕೆತ್ತನೆ ಕೆಲಸಗಳಿಂದ ಎಲ್ಲೆಡೆ ಪ್ರಸಿದ್ಧಿ ಹೊಂದಿವೆ. ಹಳೆಯ ಕಾಲದ ಶಾಸನಗಳು ಭಾರತದಲ್ಲಿ ಸಹಸ್ರಾರು ವರ್ಷಗಳ ಹಿಂದೆಯೇ ಭವ್ಯವಾದ ದೇವಾಲಯಗಳು ನಿರ್ಮಿಸಲ್ಪಟ್ಟಿದ್ದವು ಅನ್ನೋದನ್ನು ಸಾರಿ ಹೇಳುತ್ತದೆ.
ದೇಶದ ವಿವಿಧೆಡೆಯಲ್ಲಿರುವ ದೇವಾಲಯದಲ್ಲಿರುವ ಬೃಹತ್ ಕಂಬಗಳು, ಮಂಟಪಗಳು, ವಿಗ್ರಹಗಳು ವರುಷಗಳಷ್ಟು ಹಿಂದಿನ ಕತೆಯನ್ನು ಸಾರಿ ಹೇಳುತ್ತವೆ. ಭಾರತದಲ್ಲಿ ಎಣಿಕೆಗೂ ಮೀರಿದ ಹಿಂದೂ ದೇವಾಲಯಗಳನ್ನು ನಾವು ನೋಡಬಹುದು. ಹಿಂದೂ ಧರ್ಮದ ಆಚಾರ-ವಿಚಾರ, ಸಂಸ್ಕೃತಿ-ಆಚರಣೆ, ವಾಸ್ತುಶಿಲ್ಪ, ಕೆತ್ತನೆ ಕುಸುರಿ ಕಾರ್ಯಗಳನ್ನು ಈ ದೇವಾಲಯಗಳು ಪ್ರತಿನಿಧಿಸುತ್ತವೆ. ಅದರಲ್ಲೂ 1000ಕ್ಕೂ ಹೆಚ್ಚು ವರ್ಷಗಳ ಐತಿಹ್ಯವನ್ನು ಹೊಂದಿರುವ ಅದೆಷ್ಟೋ ದೇವಾಲಯಗಳು ಭಾರತದಲ್ಲಿವೆ. ಆ ಪುರಾತನ ದೇವಾಲಯಗಳು ಯಾವುವು..? ಅವುಗಳ ಮಹತ್ವವೇನು ತಿಳಿಯೋಣ..
ಮಹಾರಾಷ್ಟ್ರದಲ್ಲಿರುವ ಕೈಲಾಸ ದೇವಾಲಯ, ಭುವನೇಶ್ವರದಲ್ಲಿರುವ ಲಿಂಗರಾಜ ದೇವಾಲಯ, ಮಹಾಬಲಿಪುರಂನಲ್ಲಿರುವ ಶೋರ್ ದೇವಾಲಯ, ಕುಂಭಕೋಣಂನಲ್ಲಿರುವ ಆದಿ ಕುಂಬೇಶ್ವರರ್ ದೇವಾಲಯ, ಕರ್ನಾಟಕದ ಭೋಗ ನಂದೀಶ್ವರ ದೇವಾಲಯ, ಐಹೊಳೆಯ ಲಾಡ್ ಖಾನ್ ದೇವಾಲಯ, ಐಹೊಳೆಯ ದುರ್ಗಾ ದೇವಾಲಯ 1000ಕ್ಕೂ ಹೆಚ್ಚು ವರ್ಷಗಳ ಐತಿಹ್ಯವನ್ನು ಹೊಂದಿರುವ ಕೆಲವು ದೇವಾಲಯಗಳಿವೆ.
ಮಹಾರಾಷ್ಟ್ರದಲ್ಲಿರುವ ಕೈಲಾಸ ದೇವಾಲಯ
Image credits : Native Planet
ಮಹಾರಾಷ್ಟ್ರದ ಐತಿಹಾಸಿಕ ಪುರಾವೆಗಳ ಪ್ರಕಾರ, ಕೈಲಾಸ ದೇವಾಲಯವು ಕ್ರಿ.ಶ 8ನೇ ಶತಮಾನದಲ್ಲೇ ನಿರ್ಮಾಣಗೊಂಡಿದೆ. ಈ ದೇಗುಲದ ವಿಶೇಷತೆಯೆಂದು ಕೈಲಾಸ ದೇವಾಲಯವು ಭಾರತದ ಅತಿದೊಡ್ಡ ಕಲ್ಲು ಕೆತ್ತನೆಯ ದೇವಾಲಯಗಳಲ್ಲಿ ಒಂದಾಗಿದೆ. ಮಹಾರಾಷ್ಟ್ರದ ಎಲ್ಲೋರಾ ಗುಹೆಯಲ್ಲಿ ಈ ದೇವಸ್ಥಾನವಿದೆ. ಪಲ್ಲವ ವಾಸ್ತುಶಿಲ್ಪ ಶೈಲಿಯಲ್ಲಿರುವ ಈ ದೇಗುಲವು ಕೇವಲ ಒಂದು ದೊಡ್ಡ ಬಂಡೆಯನ್ನು ಬಳಸಿ ನಿರ್ಮಿತವಾಗಿದೆ. ಕೈಲಾಸ ದೇವಾಲಯವು 32 ಗುಹಾ ದೇವಾಲಯಗಳಲ್ಲಿ ಒಂದಾಗಿದ್ದು, ಶಿವನು ಈ ದೇವಾಲಯದಲ್ಲಿ ಮುಖ್ಯ ಆರಾಧಕನಾಗಿದ್ದಾನೆ. ಈ ದೇವಾಲಯದಲ್ಲಿ 5 ವಿಭಿನ್ನ ಚಿಕ್ಕ ದೇವಾಲಯಗಳಿದ್ದು, ಅವುಗಳಲ್ಲಿ 3 ದೇವಾಲಯವನ್ನು ಗಂಗಾ, ಯಮುನಾ ಮತ್ತು ಸರಸ್ವತಿಗೆ ಅರ್ಪಿಸಲಾಗಿದೆ.
ಭುವನೇಶ್ವರದಲ್ಲಿರುವ ಲಿಂಗರಾಜ ದೇವಾಲಯ
Image Credits : India the Destiny
ಒಡಿಶಾದ ರಾಜಧಾನಿಯಾದ ಭುವನೇಶ್ವರದಲ್ಲಿ ಲಿಂಗರಾಜ ದೇವಾಲಯವಿದೆ. ಕಳಿಂಗ ವಾಸ್ತುಶಿಲ್ಪವನ್ನು ಪ್ರತಿನಿಧಿಸುವ ಈ ದೇವಾಲಯವನ್ನು ಸೋಮವಂಶದ ರಾಜರು ಸುಮಾರು 11ನೇ ಶತಮಾನದಲ್ಲಿ ನಿರ್ಮಿಸಿದರು ಎಂದು ಹೇಳಲಾಗುತ್ತದೆ. ಸುಮಾರು 180 ಎತ್ತರದ ಗೋಪುರವನ್ನು ಒಳಗೊಂಡಿರುವುದು ಈ ದೇವಾಲಯದ ವಿಶೇಷ. ದೇವಾಲಯದಲ್ಲಿ ಭಗವಾನ್ ವಿಷ್ಣುವನ್ನು ಮತ್ತು ಶಿವನನ್ನು ಪೂಜಿಸಲಾಗುತ್ತದೆ. ದೇವಾಲಯದ ಸಂಕೀರ್ಣದಲ್ಲಿ 50 ಇತರ ದೇವಾಲಯಗಳೂ ಇವೆ. ದೇವುಲ ಶೈಲಿಯಲ್ಲಿ ಈ ದೇವಸ್ಥಾನವನ್ನು ಕಟ್ಟಲಾಗಿದೆ. ಇದು ವಿಮಾನ, ಜಗಮೋಹನ, ನಟಮಂದಿರ, ಭೋಗಮಂಟಪ ಮೊದಲಾದ ಶೈಲಿಯ ಸಂಕೀರ್ಣವನ್ನು ಒಳಗೊಂಡಿದೆ.
ಮಹಾಬಲಿಪುರಂನ ಶೋರ್ ದೇವಾಲಯ
Image Credits : Britannica
ಮಹಾಬಲಿಪುರಂ ತಮಿಳುನಾಡಿನ ಕಾಂಚೀಪುರಂ ಸಮೀಪದಲ್ಲಿರುವ ಒಂದು ಪ್ರಮುಖ ದೇವಾಲಯವಾಗಿದ್ದು, ಅದರ ಇತಿಹಾಸ ಮತ್ತು ವಾಸ್ತುಶಿಲ್ಪದ ಅದ್ಭುತತೆಗಾಗಿ ಜಾಗತಿಕವಾಗಿ ಪ್ರಸಿದ್ಧವಾಗಿದೆ. ಈ ದೇವಾಲಯವು ಸುಮಾರು ಕ್ರಿ.ಶ 700 ನೇ ಶತಮಾನದಲ್ಲಿ ಪಲ್ಲವ ಸಾಮ್ರಾಜ್ಯದ ರಾಜ ಎರಡನೇ ನರಸಿಂಹವರ್ಮನ್ನ ಆಳ್ವಿಕೆ ಅವಧಿಯಲ್ಲಿ ನಿರ್ಮಾಣಗೊಂಡಿತು ಎಂದು ತಿಳಿದುಬಂದಿದೆ. ಇಲ್ಲಿನ ಕಟ್ಟಡಗಳು ಮತ್ತು ಹಳೆಯ ಸ್ಮಾರಕಗಳು ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದು ಪರಿಗಣಿಸಲಾಗಿದೆ. ಹಿರಣ್ಯ ಕಶ್ಯಪುವಿನ ಮಗ ಪ್ರಹ್ಲಾದನ ಮೊಮ್ಮಗನಾದ ಬಲಿ ಈ ದೇವಾಲಯವನ್ನು ನಿರ್ಮಿಸಿದನೆಂಬ ನಂಬಿಕೆಯಿದೆ. 2004ರ ಡಿಸೆಂಬರ್ನಲ್ಲಿ ಅಪ್ಪಳಿಸಿದ್ದ ಸುನಾಮಿಗೆ ಈ ದೇವಾಲಯ ಹಾನಿಗೊಳಗಾಗಿದ್ದು, ದೇವಾಲಯದ ವಿಗ್ರಹಗಳು, ಕೆತ್ತನೆ ಕೆಲಸ ಮಾಡಿರುವ ಕಂಬಗಳು ನೀರಿನಲ್ಲಿ ಕೊಚ್ಚಿ ಹೋಗಿವೆ
ಕುಂಭಕೋಣಂನ ಆದಿ ಕುಂಬೇಶ್ವರರ್ ದೇವಾಲಯ
Image Credits : Tamilnadu Tourism
ತಮಿಳುನಾಡಿನ ಕುಂಭಕೋಣಂನಲ್ಲಿನ ಈ ದೇವಾಲಯವನ್ನು ಚೋಳ ರಾಜವಂಶಸ್ಥರು 9ನೇ ಶತಮಾನದಲ್ಲಿ ನಿರ್ಮಿಸಿದರೆಂದು ಹೇಳಲಾಗಿದೆ. ಶಿವನಿಗೆ ಸಮರ್ಪಿಸಲ್ಪಟ್ಟಿರುವ ಈ ದೇವಾಲಯ 1000 ವರ್ಷಗಳ ಐತಿಹ್ಯವನ್ನು ಹೊಂದಿದೆ. ದಕ್ಷಿಣ ಭಾರತದ ಅತ್ಯುತ್ತಮ ದೇವಾಲಯಗಳಲ್ಲಿ ಒಂದಾದ ಆದಿ ಕುಂಬೇಶ್ವರರ್ ದೇವಾಲಯವು 30,181 ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ. ಇಲ್ಲಿ ಶಿವನನ್ನು ಆದಿ ಕುಂಭೇಶ್ವರರ್ ಎಂದು ಮತ್ತು ಪಾರ್ವತಿಯನ್ನು ಮಂಗಳಾಂಬಿಗೈ ಎಂದು ಕರೆಯಲಾಗುತ್ತದೆ. ಇಲ್ಲಿನ ಶಿವನ ದೇವಾಲಯದಲ್ಲಿ 27 ನಕ್ಷತ್ರಗಳು ಮತ್ತು 12 ರಾಶಿಚಕ್ರದ ಚಿಹ್ನೆಗಳನ್ನು ಕಾಣಬಹುದು. ಈ ದೇವಾಲಯಕ್ಕೆ ಪ್ರತಿವರ್ಷವೂ ಅನೇಕ ಭಕ್ತರು ಭೇಟಿ ನೀಡುತ್ತಾರೆ.
ಕರ್ನಾಟಕದ ಭೋಗ ನಂದೀಶ್ವರ ದೇವಾಲಯ
Image Credits : Thrillophillia
ಭೋಗ ನಂದೀಶ್ವರ ದೇವಾಲಯವು ಕರ್ನಾಟಕದ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟದ ತಪ್ಪಲಿನಲ್ಲಿದೆ. ಇದು ಹಿಂದೂ ದೇವಾಲಯವಾಗಿದ್ದು, ಮಹಾಶಿವನನ್ನು ಇಲ್ಲಿ ಲಿಂಗ ಸ್ವರೂಪದಲ್ಲಿ ಆರಾಧಿಸಲಾಗುತ್ತದೆ. ದಕ್ಷಿಣ ಭಾರತೀಯ ವಾಸ್ತು ಶಿಲ್ಪ ಶೈಲಿಯಲ್ಲಿ ಅತ್ಯುತ್ತಮವಾದ ಮಾದರಿಯಲ್ಲಿ ಈ ದೇವಾಲಯ ನಿರ್ಮಾಣ ಮಾಡಲಾಗಿದೆ. ಈ ದೇವಾಲಯವನ್ನು 9ನೇ ಶತಮಾನದಲ್ಲಿ ದ್ರಾವಿಡ ವಾಸ್ತುಶಿಲ್ಪ ಶೈಲಿಯಲ್ಲಿ ಈ ದೇವಾಲಯವನ್ನು ನಿರ್ಮಿಸಲಾಗಿದೆ. ಶಿವನಿಗೆ ಅರ್ಪಿತವಾಗಿರುವ ಈ ದೇವಾಲಯನ್ನು ಮೂಲತಃ ಬಾಣಾ ರಾಣಿ ರತ್ನಾವಳಿ ನಿರ್ಮಿಸಿದಳು ಎಂದು ತಿಳಿದುಬಂದಿದೆ. ನಂತರ ಗಂಗಾ ರಾಜವಂಶರು, ಚೋಳರು, ಪಲ್ಲವರು ಹಾಗೂ ವಿಜಯನಗರ ಸಾಮ್ರಾಜ್ಯದ ಆಡಳಿತಗಾರರು ದೇವಾಲಯವನ್ನು ಅಭಿವೃದ್ಧಿಗೊಳಿಸಿದರು ಎಂದು ಶಾಸನಗಳಲ್ಲಿ ಉಲ್ಲೇಖಿಸಲಾಗಿದೆ.
ಐಹೊಳೆಯ ದೇವಾಲಯಗಳು
Image Credits : Karnataka.com
ಕರ್ನಾಟಕದ ಬಾಗಲಕೋಟೆ ಜಿಲ್ಲೆಯಲ್ಲಿರುವ ಪ್ರಖ್ಯಾತ ಐತಿಹಾಸಿಕ ತಾಣವಾದ ಐಹೊಳೆಯ ದೇವಾಲಯಗಳು ಭಾರತದ ಅತ್ಯಂತ ಪುರಾತನ ದೇವಾಲಯಗಳೆಂದು ಪರಿಗಣಿಸಲ್ಪಟ್ಟಿವೆ. ಇಲ್ಲಿನ ಲಾಡ್ ಖಾನ್ ದೇವಾಲಯವನ್ನು ಸುಮಾರು 5ನೇ ಶತಮಾನದಲ್ಲಿ ಚಾಲುಕ್ಯರು ನಿರ್ಮಿಸಿದರೆಂದು ಹೇಳಲಾಗುತ್ತದೆ. ಐಹೊಳೆಯ ಅತ್ಯಂತ ಪುರಾತನ ದೇವಾಲಯವಾಗಿದ್ದು, ಲಾಡ್ಖಾನ್ ದೇವಾಲಯ ಶಿವನನ್ನು ಆರಾಧಿಸುವ ದೇಗುಲವಾಗಿದೆ. ಲಾಡ್ ಖಾನ್ ದೇವಾಲಯವು ಹಿಂದೂ ಧರ್ಮದ ಶೈವ, ವೈಷ್ಣವ ಮತ್ತು ಶಕ್ತಿ ಸಂಪ್ರದಾಯಗಳಿಂದ ಶಿಲ್ಪಶಾಸ್ತ್ರವನ್ನು ಪ್ರದರ್ಶಿಸುತ್ತದೆ.
ಐಹೊಳೆಯಲ್ಲಿರುವ ಮತ್ತೊಂದು ಸುಂದರವಾದ ದೇವಾಲಯವೆಂದರೆ 7 ಮತ್ತು 8ನೇ ಶತಮಾನದಲ್ಲಿ ಚಾಲುಕ್ಯರು ನಿರ್ಮಿಸಿದ ಪ್ರಸಿದ್ಧ ದುರ್ಗಾ ದೇವಾಲಯ. ದುರ್ಗಾ ದೇವಾಲಯವು ಐಹೊಳೆಯಲ್ಲಿನ ಪ್ರಾಥಮಿಕ ಆಕರ್ಷಣೆಯಾಗಿದೆ ಮತ್ತು ಐಹೊಳೆ ದೇವಾಲಯಗಳ ಅತ್ಯಂತ ಅದ್ಭುತ ನಿರೂಪಣೆಯಾಗಿದೆ. ದುರ್ಗಾ ದೇವಾಲಯದ ವಾಸ್ತುಶಿಲ್ಪವನ್ನು ಭಾರತೀಯ ಸಾಂಪ್ರದಾಯಿಕ ವಾಸ್ತುಶಿಲ್ಪದಲ್ಲಿ ಗಜಪ್ರಸ್ಥವೆಂದು ಪರಿಗಣಿಸಲಾಗಿದೆ. ದೇವಾಲಯವನ್ನು ಭಗವಾನ್ ವಿಷ್ಣು ಮತ್ತು ಶಿವನಿಗೆ ಸಮರ್ಪಿಸಲಾಗಿದೆ. ದುರ್ಗಾ ದೇವಾಲಯ ಸಂಕೀರ್ಣದಲ್ಲಿ ಪುರಾತತ್ವ ವಸ್ತು ಸಂಗ್ರಹಾಲಯ ಮತ್ತು ಕಲಾ ಗ್ಯಾಲರಿ ಇದೆ.
from Planet Tv https://ift.tt/3z8hsbA
June 05, 2021 at 03:47PM