ಇತ್ತೀಚಿನ ದಿನಗಳಲ್ಲಿ ಮಗು ಮಾತಾಡೋದು ಕಲಿಯೋಕೂ ಮುಂಚೇನೆ ಕಂಪ್ಯೂಟರ್ ನಲ್ಲಿ ಗೇಮ್ ಆಡೋಕೆ ಶುರು ಮಾಡುತ್ತೆ. ಇದನ್ನ ನೋಡಿದ ತಂದೆ ತಾಯಿ ಅಯ್ಯೋ ನಮ್ಮ ಮಗು ಕಂಪ್ಯೂಟರ್ ಆಪರೇಟ್ ಮಾಡ್ತಾನೆ. ಎಷ್ಟು ಚಂದಾಗಿ ಗೇಮ್ ಆಡ್ತಾನೆ ಅಂತ ಪಕ್ಕದ ಮನೆಯವರ ಹತ್ತಿರ ಬೀಗ್ತಾರೆ. ಹಾಗೆ ಬೀಗೋಕು ಮುಂಚೆ ನಿಮ್ಮ ಮಗು ಕಂಪ್ಯೂಟರ್ನಲ್ಲಿ ಏನ್ ಮಾಡ್ತಿದೆ, ಯಾವ ಗೇಮ್ ಆಡ್ತಿದೆ. ಎಷ್ಟು ಹೊತ್ತು ಗೇಮ್ ಆಡ್ತಿದೆ ಅನ್ನೋದನ್ನ ಗಮನಿಸಿ. ಜೊತೆಗೆ ಈ ಕೊರೋನ ಕಾಲದಲ್ಲಿ ಆನ್ಲೈನ್ ಕ್ಲಾಸ್ಗಳ ಅನಿವಾರ್ಯತೆಗೆ ಬಿದ್ದು ಮಕ್ಕಳ ಕೈಗೆ ಮೊಬೈಲ್, ಕಂಪ್ಯೂಟರ್ ಕೊಟ್ಟು ಕೈಕಟ್ಟಿ ಕೂರಬೇಡಿ. ಅವರ ಕಡೆಗೆ ಗಮನವಿರಲಿ. ಯಾಕೆಂದ್ರೆ ಮಕ್ಕಳು ವಿಡಿಯೋ ಗೇಮ್ಗಳ ದಾಸರಾಗುತ್ತಿದ್ದಾರೆ. ಚಿಣ್ಣರಿಂದ ಹಿಡಿದು ಯುವಕರವರೆಗೆ ಎಲ್ಲರನ್ನೂ ಈ ಎಲೆಕ್ಟ್ರಾನಿಕ್ ಗೇಮ್ಗಳು ಬಹು ಬೇಗ ಆಕರ್ಷಿಸುತ್ತವೆ. ಹೊಸ ತಲೆಮಾರಿನ ಮಕ್ಕಳು ಈ ಗೇಮ್ಗಳನ್ನ ನಿದ್ದೆಯಲ್ಲೂ ಕನವರಿಸುತ್ತವೆ.
Image source:FT.com
ವರ್ಷದಿಂದ ವರ್ಷಕ್ಕೆ ವಿಡಿಯೋ ಗೇಮ್ ವಹಿವಾಟು ಹೆಚ್ಚುತ್ತಿದೆ. ವರ್ಷಕ್ಕೆ ಲಕ್ಷಾಂತರ ಕೋಟಿ ಮೀರಿದ ವಹಿವಾಟು ಇಲ್ಲಿದೆ. ಇಷ್ಟು ಆದಾಯ ಇರೋದ್ರಿಂದಾನೆ ಈ ಉದ್ಯಮದಲ್ಲಿ ತೊಡಗಿರೋ ಕಂಪೆನಿಗಳು ಮಕ್ಕಳ ಗಮನ ಗೇಮ್ನಿಂದ ಆಚೀಚೆ ಹೋಗದಂತೆ ಹಿಡಿದಿಡಲು ಪ್ರಯತ್ನಿಸುತ್ವೆ. ಹೊಸ ಹೊಸ ಗೇಮ್ಗಳು ಮಾರುಕಟ್ಟೆಗೆ ಬರ್ತಾ ಇರುತ್ವೆ. ಹಳೆ ಗೇಮ್ಗಳ ಹೊಸ ವರ್ಷನ್ ಕೂಡ ಬರುತ್ತಿರುತ್ತವೆ.
ಒಂದು ಕಡೆ ಆನ್ಲೈನ್ ಗೇಮ್ಗಳು ಪಾಪ್ಯುಲರ್ ಆಗುತ್ತಿದ್ದಂತೆ, ಇತ್ತ ಗೇಮ್ ಡೆವಲಪ್ ಮಾಡೋ ಹೊಸ ಕಂಪನಿಗಳು ತಲೆ ಎತ್ತುತ್ತಿವೆ. ಪರಿಸ್ಥಿತಿ ಹಿಂಗೆ ಮುಂದುವರಿದರೆ ಮುಂದಿನ ತಲೆಮಾರಿನ ಮಕ್ಕಳು ಗ್ರೌಂಡ್ಗೆ ಹೋಗಿ ಆಟ ಆಡೋದನ್ನ ನಿಲ್ಲಿಸಿಬಿಡ್ತಾರೆನೋ. ಕೇವಲ ಕಂಪ್ಯೂಟರ್ ಮಾತ್ರ ಅಲ್ಲ ಸ್ಮಾರ್ಟ್ಫೋನ್ಗಳಲ್ಲೂ ಈ ಆನ್ಲೈನ್ ಗೇಮ್ ಆ್ಯಪ್ಗಳನ್ನ ಸುಲಭವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದು. ನೀವು ಜಗತ್ತಿನ ಯಾವ ಭಾಗದಲ್ಲಿದ್ರೂ ನಿಮ್ಮ ಮೊಬೈಲ್ ಪರದೆ ಟಚ್ ಮಾಡಿದ್ರೆ ಸಾಕು ಆನ್ಲೈನ್ ಗೇಮ್ ಆಡಬಹುದು.
image source-dana.org
ಅಪಾಯಕಾರಿ ಆನ್ಲೈನ್ ಗೇಮಿಂಗ್..!
ಆನ್ಲೈನ್ ಗೇಮಿಂಗ್ ಕಾಲ ಕ್ರಮೇಣ ವ್ಯಸನವಾಗಿ ಮಾರ್ಪಡುತ್ತದೆ. ಧೂಮಪಾನ ಮದ್ಯಪಾನ ಹೇಗೆ ಅತಿಯಾದರೆ ಚಟವಾಗಿ ಮಾರ್ಪಡುತ್ತೋ ಹಾಗೆ ಇದೂ ಕೂಡ ವ್ಯಸನವಾಗಿ ಮಾರ್ಪಡುತ್ತದೆ. ವಿಡಿಯೋ ಗೇಮ್ಗಳಿಗೆ ದಾಸರಾಗಿ ಬಿಟ್ರೆ ಮಾನಸಿಕ ಅಸಮತೋಲನ ಉಂಟಾಗುತ್ತೆ. ಹೆಚ್ಚು ಸಮಯ ಗೇಮ್ ಆಡುವವರು ವಿಚಿತ್ರವಾಗಿ ವರ್ತಿಸ್ತಾರೆ. ಸಣ್ಣ ಪುಟ್ಟದಕ್ಕೂ ಕೋಪಗೊಳ್ತಾರೆ. ಅರಚುತ್ತಾರೆ. ಮಾತು ಮಾತಿಗೂ ವಾದಕ್ಕಿಳಿಯುತ್ತಾರೆ. ರೇಗುತ್ತಾರೆ. ವಿಪರೀತ ವಿಡಿಯೋ ಗೇಮ್ ಆಡಿದ್ರೆ ಮಕ್ಕಳ ವಿದ್ಯಾಭ್ಯಾಸ ಕುಂಠಿತಗೊಳ್ಳುತ್ತೆ. ಅವರಿಗೆ ಓದಿನ ಮೇಲೆ ಆಸಕ್ತಿ ಕಡಿಮೆಯಾಗುತ್ತೆ. ಒಂದು ವೇಳೆ ಓದಲು ಕೂತರೂ ಏಕಾಗ್ರತೆ ಇರೋದಿಲ್ಲ.
2018ರಲ್ಲಿ ವಿಡಿಯೋ ಗೇಮ್ಗೆ ದಾಸನಾಗಿದ್ದ ದೆಹಲಿಯ ಓರ್ವ ಯುವಕ, ಗೇಮ್ ಆಡೋದಕ್ಕೆ ತಂದೆ ತಾಯಿ ವಿರೋಧಿಸಿದರೆಂಬ ಕಾರಣಕ್ಕೆ ತಂದೆ ತಾಯಿ ಹಾಗೂ ಸಹೋದರಿಯನ್ನ ಕೊಲೆಗೈದ. ತೈವಾನ್ನಲ್ಲಿ ಸತತ ನಲವತ್ತು ಗಂಟೆ ವಿಡಿಯೋ ಗೇಮ್ ಆಡಿ ಯುವಕನೊರ್ವ ಸಾವನ್ನಪ್ಪಿದ್ದ. ಹೀಗೆ ಅದರ ದುಷ್ಪರಿಣಾಮಗಳು ಒಂದಾ ಎರಡಾ.. ಎಷ್ಟೋ ಮಕ್ಕಳ ಜೀವನವನ್ನ ನಾಶ ಮಾಡಿದೆ
ಮಕ್ಕಳು ಹಿಂಸೆಯನ್ನು ಎಂಜಾಯ್ ಮಾಡುತ್ವೆ..!
ಈ ವ್ಯಸನಕ್ಕೆ ಅಂಟಿಕೊಂಡ ಮಕ್ಕಳು ಸದಾ ಕಂಪ್ಯೂಟರ್ನಲ್ಲೇ ಮುಳುಗಿ ಹೋಗ್ತಾರೆ. ಮನೆಯವರು ಅವರ ವರ್ತನೆಯನ್ನ ಖಂಡಿಸಿದ್ರೆ ವಿಚಿತ್ರವಾಗಿ ವರ್ತಿಸುತ್ತಾರೆ. ಮಕ್ಕಳು ಆ ಗೇಮ್ಗಳಿಂದ ಎಷ್ಟು ಪ್ರಭಾವಿತ ವಾಗುತ್ತವೆ ಅಂದ್ರೆ ಆ ಗೇಮ್ ನಲ್ಲಿನ ಹಿಂಸೆಯನ್ನ ಎಂಜಾಯ್ ಮಾಡುತ್ತವೆ. ಮನೆಯಲ್ಲಿ ಒಂದು ಮಗು ಇದಕ್ಕೆ ಅಂಟಿಕೊಳ್ತು ಅಂದ್ರೆ ಮುಗೀತು ಇತರ ಮಕ್ಕಳು ಅದನ್ನೇ ಅನುಸರಿಸುತ್ತವೆ. ಒಂದು ಗೇಮ್ ಅವರ ಜೀವಿತದ ಮೇಲೆ ಸಾಕಷ್ಟು ಪ್ರಭಾವ ಬೀರುತ್ತದೆ..
ಮಕ್ಕಳು ಕ್ರೌರ್ಯವನ್ನ ಬೆಳೆಸಿಕೊಳ್ಳುತ್ತವೆ. ಇತರ ಮಕ್ಕಳೊಂದಿಗೆ ಜಗಳಕ್ಕೆ ಬೀಳುತ್ವೆ. ಒಂದು ಸಲ ನಿಮ್ಮ ಮಕ್ಕಳು ಈ ವ್ಯಸನಕ್ಕೆ ಜಾರಿದವು ಅಂದ್ರೆ ಅದರಿಂದ ಮಕ್ಕಳನ್ನು ಹೊರತರೋದು ಕಷ್ಟ. ಮಕ್ಕಳು ಈ ವರ್ಚುಯಲ್ ಜಗತ್ತಿನೊಂದಿಗೆ ಬೆಳೆದು ಬಿಟ್ರೆ ಅವರಿಗೆ ಮಾನವ ಸಮಾಜದ ಜೊತೆ ಹೊಂದಿಕೊಳ್ಳೊದು ಕಷ್ಟವಾಗುತ್ತೆ.
ಕೋಟಿಗಟ್ಟಲೆ ವ್ಯವಹಾರ. ಮಕ್ಕಳ ಭವಿಷ್ಯದೊಂದಿಗೆ ಚೆಲ್ಲಾಟ. ಇದು ಆನ್ಲೈನ್ ಗೇಮಿಂಗ್ ವ್ಯವಹಾರ. ಕೆಲವರು ಗೇಮಿಂಗ್ ಅನ್ನು ಅಗತ್ಯಮಟ್ಟದಲ್ಲಿ ಬಳಸಿಕೊಂಡರೆ ಮಾತ್ರ ಒಳ್ಳೆಯದು ಅಂತಿದ್ದಾರೆ. ಆದ್ರೆ ಈ ವಿಚಾರದಲ್ಲಿ ತಂದೆ ತಾಯಿ ವಹಿಸೋ ಜವಬ್ಧಾರಿ ಮುಖ್ಯ ಅನ್ನುತ್ತಿದ್ದಾರೆ. ಇಲ್ಲವಾದರೆ ಅಪಾಯ ಅಂತ ಎಚ್ಚರಿಕೆ ನೀಡ್ತಾ ಇದ್ದಾರೆ
ಮನುಷ್ಯ ಮಾಡೋ ಪ್ರತಿ ಆವಿಷ್ಕಾರದಿಂದ ಎರಡು ಪರಿಣಾಮ ಉಂಟಾಗುತ್ತೆ. ಅಗತ್ಯದಷ್ಟು ಬಳಸಿಕೊಂಡರೆ ಒಳಿತು, ಅತಿಯಾದರೆ ಕೆಡುಕು. ಹೊಸ ಆವಿಷ್ಕಾರಗಳು ಪ್ರಪಂಚವನ್ನ ಹೊಸ ದಿಕ್ಕಿನೆಡೆಗೆ ಕೊಂಡೊಯ್ಯುತ್ತವೆ. ಇತ್ತೀಚಿನ ದಿನಗಳಲ್ಲಿ ಪ್ರತಿ ಆವಿಷ್ಕಾರಕ್ಕೂ ಉತ್ತಮ ತಳಹದಿ ಇರಬೇಕು ಅಂತೇನಿಲ್ಲ. ಗಳಿಕೆಯ ಅಂಶವನ್ನು ಮಾತ್ರ ಇಲ್ಲಿ ಪರಿಗಣಿಸಲಾಗುತ್ತೆ. ನಿಮಗೆ ನೆನಪಿರಲಿ ಯಾವ ಆವಿಷ್ಕಾರ ಮಾನವನ ಒಳಿತನ್ನ ಲೆಕ್ಕಿಸೋದಿಲ್ವೋ ಆಗ ಆ ಆವಿಷ್ಕಾರದ ಬಗ್ಗೆ ನೀವು ಭಯಪಡಲೇ ಬೇಕಾಗುತ್ತೆ
from ಸುದ್ದಿ - Planet Tv https://ift.tt/3hmAAMn
May 13, 2021 at 12:41AM