ತಮಿಳುನಾಡಿನ ಕಂಚಿಯಷ್ಟೇ ಶ್ರೇಷ್ಠವಾದ ಕರ್ನಾಟಕದ ಕೋಲಾರದ ಉತ್ತಮಕಂಚಿ
Image credits: https://ift.tt/3p8YCw2
ತಮಿಳುನಾಡಿನ ಕಂಚಿ ದೇವಸ್ಥಾನ ಅಥವಾ ಕಾಂಚೀಪುರಂ ದೇವಸ್ಥಾನ ಎಲ್ಲರಿಗೂ ಗೊತ್ತೇ ಇದೆ. ಕಂಚಿ ದೇವಸ್ಥಾನ, ಭಾರತದ ಮಹಾ ಪುಣ್ಯಕ್ಷೇತ್ರಗಳಲ್ಲಿ ಒಂದು. ಈ ದೇವಸ್ಥಾನವು ಪ್ರಾಚೀನ ಸಂಸ್ಕೃತಿಯ ನೆಲೆವೀಡಾಗಿದ್ದು, ಭವ್ಯ ದೇವಾಲಯವೆಂಬ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಈ ದೇವಸ್ಥಾನಕ್ಕೆ ಕಾಂಚೀಪುರ, ಕಾಜೀವರಂ ಎಂಬ ಹೆಸರುಗಳೂ ಇವೆ. ವರ್ಷಂಪ್ರತಿ ಇಲ್ಲಿ ನಡೆಯುವ ಉತ್ಸವಗಳಿಗೆ ದಕ್ಷಿಣ ಭಾರತದಿಂದ ಮಾತ್ರವಲ್ಲದೆ ಉತ್ತರ ಭಾರತದಿಂದಲೂ ಅಸಂಖ್ಯಾತ ಭಕ್ತರು ಆಗಮಿಸುತ್ತಾರೆ.
ಇಲ್ಲಿ ಗುಡಿಗೋಪುರಗಳು ತಮ್ಮ ಶಿಲ್ಪಕಲೆಯ ಭವ್ಯತೆಯಿಂದ ಅದ್ಭುತ ಎನಿಸಿಕೊಂಡಿವೆ. ಶಿವಕಂಚಿ, ವಿಷ್ಣುಕಂಚಿ ಎಂದು ನಗರ ಎರಡು ವಿಭಾಗಗಳಾಗಿದೆ. ಶಿವಕಂಚಿಯಲ್ಲಿ ಸುಪ್ರಸಿದ್ಧ ಕಾಮಾಕ್ಷಿ, ಏಕಾಂಬರೇಶ್ವರ, ಕೈಲಾಸನಾಥ ದೇವಸ್ಥಾನಗಳಿವೆ. ಶಂಕರಾಚಾರ್ಯರ ಪೀಠಗಳಲ್ಲಿ ಒಂದಾದ ಕಾಮಕೋಟಿ ಪೀಠವಿರುವುದೂ ಇಲ್ಲೇ. ವಿಷ್ಣುಕಂಚಿಯಲ್ಲಿ ವರದರಾಜಸ್ವಾಮಿ ದೇವಸ್ಥಾನವಿದೆ.
Image credits: https://ift.tt/2RcQBda
ಇಲ್ಲಿನ ಏಕಾಂಬರ ದೇವಸ್ಥಾನ ಇಡೀ ಭಾರತದಲ್ಲೇ ಅತ್ಯಂತ ದೊಡ್ಡ ದೇವಸ್ಥಾನವಾಗಿದೆ. ಇದರ ಗೋಪುರದ ಎತ್ತರ 57.24 ಮೀ, ಗೋಡೆ ಇಪ್ಪತ್ತೈದು ಎಕರೆ ಪ್ರದೇಶವನ್ನು ಒಳಗೊಂಡಿದೆ. ಕೇಂದ್ರ ದೇವಸ್ಥಾನದ ಸುತ್ತ ಅರವತ್ತುಮೂರು ಪುರಾತನ ವಿಗ್ರಹಗಳಿವೆ. ಏಕಾಂಬರನಾಥ ದೇವಸ್ಥಾನವನ್ನು ಬಿಟ್ಟರೆ ಉಳಿದ ಶೈವ ದೇವಸ್ಥಾನಗಳಲ್ಲಿ ಕಾಮಾಕ್ಷಿ ದೇವಸ್ಥಾನ ಪ್ರಸಿದ್ಧವಾದುದು. ಆದರೆ ನಿಮಗೆ ಗೊತ್ತಾ..,ತಮಿಳುನಾಡಿನ ಕಂಚಿಯಷ್ಟೇ ಪ್ರಾಚೀನವಾದ, ಅದೇ ಹೆಸರಿನಿಂದ ಕರೆಯಲ್ಪಡುವ ದೇವಾಲಯವೊಂದು ಕರ್ನಾಟಕದಲ್ಲಿದೆ.
ಕರ್ನಾಟಕದ ‘ಕಂಚಿ’ ದೇವಸ್ಥಾನ
ಹೌದು, ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಉತ್ತನೂರು ಎಂಬಲ್ಲಿರುವ ಈ ವಿಶಿಷ್ಟ ಸ್ಥಳವನ್ನು ಕರ್ನಾಟಕದ ಕಂಚಿಯೆಂದೇ ಕರೆಯಲಾಗುತ್ತಿದೆ. ಈ ಕ್ಷೇತ್ರಕ್ಕೆ ಲಭಿಸಿರುವ ಶಾಸನಗಳ ಪ್ರಕಾರ ಈ ದೇವಾಲಯಕ್ಕೆ 1500 ವರ್ಷಗಳ ಇತಿಹಾಸವಿದೆ. ಪುರಾಣ ಪ್ರಸಿದ್ಧ ಶ್ರೀ ವರದರಾಜ ಸ್ವಾಮಿ. ಪ್ರಹ್ಲಾದ ಮತ್ತು ಶಕುನಶಕ್ತಿ ಹಲ್ಲಿರಾಜನನ್ನು ಒಳಗೊಂಡ ದೇವಾಲಯ ಇದಾಗಿದೆ. ಪ್ರಾಚೀನಕಾಲದಲ್ಲಿ ಈ ದೇವಸ್ಥಾನವನ್ನು ಉತ್ತಮಪುರಿ, ಉತ್ತಮಕಂಚಿ ಎಂಬ ಹೆಸರುಗಳಿಂದಲೂ ಕರೆಯುತ್ತಿದ್ದರು.
Image credits: https://ift.tt/3vJIEeC
ಪೌರಾಣಿಕ ಹಿನ್ನಲೆ
ವಿಷ್ಣುವಿನ ಪ್ರೇರಣೆಯಂತೆ ಲೋಕಕಲ್ಯಾಣದ ಉದ್ದೇಶದಿಂದ ಭೃಗು ಮಹರ್ಷಿಗಳು ಶ್ರೀ ವರದರಾಜ ಸ್ವಾಮಿಯನ್ನು ಪ್ರತಿಷ್ಠಾಪಿಸಿದರೆಂಬ ಪ್ರತೀತಿಯಿದೆ. ತಮಿಳುನಾಡಿನ ಕಾಂಚೀಪುರಂ, ಕರ್ನಾಟಕದ ಉತ್ತಮಕಂಚಿ, ಮತ್ತು ಕೋಲಾರದ ಬಳಿಕ ಟೀಕಂಚಿ ಬಳಿಕ ಭೃಗು ಮಹರ್ಷಿಗಳು ಏಕಕಾಲದಲ್ಲಿ ಮೂರ್ತಿಯನ್ನು ಪ್ರತಿಷ್ಠಾಪಿಸಿದರು ಎಂದು ನಂಬಲಾಗಿದೆ. ಸಾಕ್ಷಾತ್ ಉಗ್ರನರಸಿಂಹನ ಅಂಶದಲ್ಲಿರುವ ವರದರಾಜಸ್ವಾಮಿಯನ್ನು ಅತೀವ ಉಗ್ರತೆಯನ್ನು ಕಂಡು ಆತಂಕಕ್ಕೊಳಗಾದ ಭೃಗು ಮಹರ್ಷಿಗಳು ಮಹಾನ್ ಹರಿಭಕ್ತ ಪ್ರಹ್ಲಾದನನ್ನು ನೆನೆದರಂತೆ. ಆಗ ಪ್ರಹ್ಲಾದ ಪ್ರಯೋಗಚಕ್ರ ಸಮೇತನಾದ ವರದರಾಜಸ್ವಾಮಿಯ ಮುಂದೆ ಪ್ರತ್ಯಕ್ಷಗೊಂಡು ಭೃಗು ಮಹರ್ಷಿಗಳನ್ನು ಅಚ್ಚರಿಗೊಳಿಸಿದನಂತೆ. ಈಗಲೂ ವರದರಾಜ ಸ್ವಾಮಿಯ ಎದುರಿನಲ್ಲಿ ಪ್ರಹ್ಲಾದ ಮೂರ್ತಿಯನ್ನು ಕಾಣಬಹುದು. ಹೀಗಾಗಿ ಈ ದೇವಸ್ಥಾನವನ್ನು ಪ್ರಹ್ಲಾದ ವರದರಾಜ ಸ್ವಾಮಿ ದೇವಸ್ಥಾನವೆಂದೇ ಕರೆಯುತ್ತಾರೆ.
Image credits: https://ift.tt/3vJIEeC
ಉತ್ತಮಕಂಚಿಯ ವಿಶೇಷತೆಗಳು
ಉತ್ತಮಕಂಚಿಯ ವರದರಾಜ ಸ್ವಾಮಿ ಮೂರ್ತಿಯ ವಿಶೇಷತೆಗಳು ಹಲವು. ಜಗತ್ತಿನ ಬೇರೆಲ್ಲಾ ಮಹಾವಿಷ್ಣು ಮೂರ್ತಿಗಳಲ್ಲಿ ಸುದರ್ಶನ ಚಕ್ರ ಸಹಜ ಮುದ್ರೆಯಲ್ಲಿದ್ದರೆ, ಈ ದೇವಸ್ಥಾನದಲ್ಲಿರುವ ಮೂರ್ತಿಯಲ್ಲಿ ಪ್ರಯೋಗ ಮುದ್ರೆಯಲ್ಲಿದೆ. ಪ್ರಯೋಗ ಮುದ್ರೆಯಲ್ಲಿರುವ ಸುದರ್ಶನ ಚಕ್ರ, ನೊಂದವರಿಗೆ ಅಭಯಹಸ್ತ, ದುಷ್ಟರಿಗೆ ಶಿಕ್ಷೆ ಎಂಬುದನ್ನು ಸೂಚಿಸುತ್ತದೆ. ಹೀಗಾಗಿಯೇ ಪ್ರಯೋಗ ಮುದ್ರೆಯ ಈ ಮೂರ್ತಿ, ದೇವಸ್ಥಾನ ಹೆಚ್ಚು ಮಹತ್ವವನ್ನು ಪಡೆದುಕೊಂಡಿದೆ. ದೇವಸ್ಥಾನವನ್ನು ಪ್ರಯೋಗಚಕ್ರ ವರದರಾಜಸ್ವಾಮಿ ದೇವಸ್ಥಾನ ಎಂದೂ ಕರೆಯುತ್ತಾರೆ.
Image credits: https://ift.tt/3vJIEeC
ಶಿವ ದೇವಾಲಯಗಳ ನಡುವೆ ವಿಷ್ಣು ದೇವಾಲಯ
ವರದರಾಜಸ್ವಾಮಿ ದೇವಾಲಯದ ಪೂರ್ವಕ್ಕೆ ಮಡಿವಾಳೇಶ್ವರ, ಪಶ್ಚಿಮಕ್ಕೆ ಉತ್ತಮೇಶ್ವರ, ಉತ್ತರಕ್ಕೆ ಕನ್ನೇಶ್ವರ ಮತ್ತು ದಕ್ಷಿಣಕ್ಕೆ ವಿಠಲೇಶ್ವರ ದೇವಾಲಯವಿದೆ. ನಾಲ್ಕು ಶಿವ ದೇವಾಲಯಗಳ ಮಧ್ಯೆಯಿರುವ ಏಕೈಕ ವಿಷ್ಣು ದೇವಾಲಯ ಎಂಬ ಹೆಗ್ಗಳಿಕೆಗೆ ಈ ದೇವಸ್ಥಾನ ಪಾತ್ರವಾಗಿದೆ. ಮೊಘಲರ ದಾಳಿಗೆ ತುತ್ತಾಗಿ 3 ಶಿವದೇವಾಲಯಗಳು ಕುರುಹೂ ಇಲ್ಲದಂತೆ ನಾಶವಾಗಿದೆ. ಪಶ್ಚಿಮಕ್ಕಿರುವ ಉತ್ತಮೇಶ್ವರ ದೇವಾಲಯವೊಂದು ಸಂರಕ್ಷಿಸಲ್ಪಟ್ಟಿದೆ.
Image credits: https://ift.tt/3vJIEeC
ಈ ದೇವಾಲಯದ ಮತ್ತೊಂದು ವಿಶೇಷತೆಯೆಂದರೆ ಶಕುನಪಕ್ಷಿ ಎಂದು ಕರೆಸಿಕೊಳ್ಳುವ ಹಲ್ಲಿಗೆ ಇಲ್ಲೊಂದು ಗರ್ಭಗುಡಿಯಿದೆ. ತಮಿಳುನಾಡಿನ ಕಂಚಿ ದೇವಸ್ಥಾನದಲ್ಲಿರುವ ಮಾದರಿಯಲ್ಲಿಯೇ ಹಲ್ಲಿರಾಜ ಮತ್ತು ಸೂರ್ಯಚಂದ್ರರು ಈ ದೇವಾಲಯದ ವಿಶಿಷ್ಟ ಆಕರ್ಷಣೆ. ದೋಷ ನಿವಾರಣೆ, ಶುಭಪ್ರದವಾಗಲು ಹಲ್ಲಿರಾಜನ ದರ್ಶನ ಉತ್ತಮ ಎಂದು ನಂಬಲಾಗಿದೆ. ವರ್ಷದ ಜನವರಿ-ಫೆಬ್ರವರಿ ತಿಂಗಳಿನಲ್ಲಿ ತಿರುಪತಿಯ ಮಾದರಿಯಲ್ಲಿಯೇ ಇಲ್ಲಿನ ವರದರಾಜಸ್ವಾಮಿಯ ಬ್ರಹ್ಮ ರಥೋತ್ಸವ ನಡೆಯುತ್ತದೆ. ಕಂಚಿ ಕಾಮಾಕ್ಷಿಯಂತೆಯೇ ಕಂಗೊಳಿಸುತ್ತಿರುವ ಇಲ್ಲಿನ ಚೌಡೇಶ್ವರಿ ದೇವಿಗೆ 12 ವರ್ಷಗಳಿಗೊಮ್ಮೆ ನಡೆಯುವ ವನಮಹೋತ್ಸವ ರಾಜ್ಯದಲ್ಲೇ ಅಪರೂಪದ ಆಚರಣೆಯಾಗಿದೆ.
ದೇವಾಲಯಕ್ಕಿದೆ ತಿರುಪತಿಯ ನಂಟು
Image credits: https://ift.tt/3vJIEeC
ಅಚ್ಚರಿಪಡುವ ವಿಷಯವೆಂದರೆ ಇಲ್ಲಿನ ವರದರಾಜಸ್ವಾಮಿಯ ಪೂಜಾಕೈಂಕರ್ಯಗಳಲ್ಲಿ ತೊಡಗಿರುವ ಐದಾರು ಮನೆಗಳ ಸುಮಾರು ಹತ್ತಕ್ಕೂ ಹೆಚ್ಚು ಅರ್ಚಕರು ತಿರುಪತಿಯ ಶ್ರೀನಿವಾಸನ ಸನ್ನಿದಿಯಲ್ಲಿ ಅರ್ಚಕ ವೃತ್ತಿಯಲ್ಲಿದ್ದಾರೆ. ಅಪ್ಪಣ್ಣಾಚಾರ್ಯರು, ದೊರೆಸ್ವಾಮಾಚಾರ್ಯರು, ವೆಂಕಟನರಸಿಂಹಾಚಾರ್ಯರಾದಿಯಾಗಿ ಇವರ ನಂತರದ ತಲೆಮಾರಿನವರನ್ನೊಳಗೊಂಡಂತೆ ನಾಲ್ಕೈದು ತಲೆಮಾರುಗಳಿಂದ ತಿರುಪತಿ ತಿಮ್ಮಪ್ಪನ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕೆಲವರು ನಿವೃತ್ತಿ ಹೊಂದಿ ಇದೇ ಊರಿನಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ.
from Planet Tv https://ift.tt/2TmQXhV
June 01, 2021 at 04:47PM